ಪ್ರೋಟೋಕಾರ್ಡೇಟ
ಆದಿಕಾರ್ಡೇಟು ಅಥವಾ ನಿಮ್ನ ಕಾರ್ಡೇಟುಗಳನ್ನು ಒಳಗೊಂಡ ಆಧಿವಿಭಾಗ. ನೋಟೋಕಾರ್ಡ್ ಎಂಬ ಆಧಾರ ರಚನೆ ಇರುವ ಪ್ರಾಣಿಗಳೇ ಕಾರ್ಡೇಟುಗಳು. ಈ ರಚನೆ ಪ್ರಾಣಿಯ ಜೀವನ ಪರ್ಯಂತ ಇರಬಹುದು ಅಥವಾ ಭ್ರೂಣಾವಸ್ಥೆಯಲ್ಲಿ ಮಾತ್ರ ಕಾಣಿಸಿಕೊಳ್ಳಬಹುದು. ಪ್ರೋಟೋಕಾರ್ಡೇಟಗಳಲ್ಲಿ ಈ ಮುಂದಿನ ಅನೇಕ ಕಾರ್ಡೇಟ್ ಗುಣಲಕ್ಷಗಳನ್ನು ಕಾಣಬಹುದು; 1 ನೋಟೋಕಾರ್ಡ್-ಇದು ದೇಹದ ಊಧ್ರ್ವಭಾಗದಲ್ಲಿ ನರಹುರಿ ಮತ್ತು ಅನ್ನನಾಳಗಳ ಮಧ್ಯದ ಅವಕಾಶದಲ್ಲಿ ಸ್ಥಿತಗೊಂಡಿರುವ ಪೆಡುಸಾದ ನಳಿಕೆಯಂಥ ರಚನೆ. ತಲೆಯಿಂದ ಬಾಲದ ತುದಿಯವರೆಗೂ ಹರಡಿದ್ದು ದೇಹಕ್ಕೆ ಆಧಾರವನ್ನೂ ಪ್ರಾಣಿಗೆ ಅಕಾರವನ್ನೂ ಸ್ನಾಯುಗಳು ಅಂಟಿಕೊಳ್ಳಲು ಮೇಲ್ಮೈಯನ್ನೂ ಇದು ಒದಗಿಸುವುದು. ಕೆಲವು ಪ್ರೋಟೋಕಾರ್ಡೇಟುಗಳಲ್ಲಿ ಇದು ಡಿಂಬಾವಸ್ಥೆಯಲ್ಲಿ ಮಾತ್ರ ಇದೆಯಾದರೆ ಇನ್ನು ಕೆಲವಲ್ಲಿ ವಯಸ್ಕಹಂತದಲ್ಲೂ ಉಳಿದಿರುತ್ತದೆ.

	2 ಡಾರ್ಸಲ್ ನಳಿಕೆ ನರಹುರಿ: ತಲೆಯಿಂದ ಬಾಲದ ತುದಿಯವರೆಗೂ ಹಬ್ಬಿರುವ ರಚನೆ. ತಲೆಭಾಗದಲ್ಲಿ ಸ್ವಲ್ಪ ದಪ್ಪವಾಗಿದ್ದು ಮೆದುಳನ್ನು ಹೋಲುತ್ತದೆ. ಆದರೆ ಕೆಲವು ಉಪಗುಂಪುಗಳಲ್ಲಿ ನರಹುರಿಯ ಮುಂಭಾಗ ನರಮುಡಿಯಾಗಿ (ಗ್ಯಾಂಗ್ಲಿಯ) ಉಳಿದು ಮಿಕ್ಕ ಭಾಗ ಕ್ಷೀಣಗೊಂಡಿರುತ್ತದೆ.

	3 ಕಿವಿರು ರಂಧ್ರಗಳು: ಇವು ಫ್ಯಾರಿಂಕ್ಸ್ ಭಿತ್ತಿಯಲ್ಲಿ ಸ್ಥಿತವಾಗಿವೆ. ಸಂಖ್ಯೆಯಲ್ಲಿ ಪ್ರೋಟೋಕಾರ್ಡೇಟುಗಳ ಉಪಗುಮಪುಗಳಲ್ಲಿ ಬೇರೆಬೇರೆಯಾಗಿವೆ. ಬಾಯಿಂದ ಒಳ ಹೊಕ್ಕ ನೀರು ಈ ರಂಧ್ರಗಳ ಮೂಲಕ ಹೊರಬರುವುದರಿಂದ ನೀರಿನಲ್ಲಿರುವ ಅವಶ್ಯಕ ಅನಿಲಗಳು ಕೋಶಗಳಿಗೂ ಅಲ್ಲಿನ ತ್ಯಾಜ್ಯ ಅನಿಲಗಳು ನೀರಿಗೂ ವಿನಿಮಯಗೊಳ್ಳುವುವು.

	ಪ್ರೋಟೋಕಾರ್ಡೇಟ ಮತ್ತು ಕಾರ್ಡೇಟುಗಳ ನಡುವಣ ಇತರ ಸಾಮಾನ್ಯ ಲಕ್ಷಣಗಳು ಇಂತಿವೆ; ದ್ವಿಪಾಶ್ರ್ವ ಸಮಮಿತಿ. ಮೂರು ಜರ್ಮ್ ಪದರಗಳು, ಸೀಲೋಮ್ ದೇಹಾಂತರಾವಕಾಶ, ಮಾರ್ಪಾಟುಗೊಂಡ ಖಂಡವಿಂಗಡಣೆ, ಚೆನ್ನಾಗಿ ರೂಪುಗೊಂಡ ಅಂಗವ್ಯೂಹಗಳು, ತಲೆ ಅಥವಾ ತಲೆಯ ಭಾಗ, ಮುಂಡ ಮತ್ತು ಬಾಲ ಎಂಬ ಮೂರುಭಾಗಗಳಾಗಿ ವಿಂಗಡಗೊಂಡ ದೇಹ, ಸ್ನಾಯುಪುಷ್ಟ ಹೃದಯ ಇಲ್ಲದಿದ್ದರೂ ಮುಖ್ಯ ರಕ್ತನಾಳ ಉಬ್ಬಿ ಹೃದಯದರೀತಿಯಲ್ಲಿ ಕೆಲಸ ಮಾಡುವುದು, ಇದಕ್ಕೆ ಹೊಂದಿಕೊಂಡಂಥ ಅಭಿವಾಹಿ ರಕ್ತನಾಳಗಳಿರುವುದು (ಇದ್ದರೆ) ವಿಶೇಷ ರೀತಿಯವಾಗಿರುವುದು. ಪ್ರೋಟೋಕಾರ್ಡೇಟದ ಸದಸ್ಯಗಳು ಸಾಮಾನ್ಯವಾಗಿ ದ್ವಿಲಿಂಗಿಗಳು. ಪ್ರೋಟೋಕಾರ್ಡೇಟವನ್ನು ಮೂರು ಉಪವಿಭಾಗಗಳನ್ನಾಗಿ ವರ್ಗೀಕರಿಸಲಾಗಿದೆ: ಯೂರೊಕಾರ್ಡೇಟ (ಟ್ಯೊನಿಕೇಟ), ಕೆಫಲೊಕಾರ್ಡೇಟ ಮತ್ತು ಹೆಮಿಕಾರ್ಡೇಟ. ಆದರೆ ಈಗಿನ ಅಧ್ಯಯನಗಳ ಪ್ರಕಾರ ಹೆಮಿಕಾರ್ಡೇಟ ಗುಂಪನ್ನು ಪ್ರೋಟೋಕಾರ್ಡೇಟದಿಂದ ಬೇರೆಮಾಡಿ ಅಕಶೇರುಕ ಗುಂಪುಗಳ ಒಂದು ಪ್ರತ್ಯೇಕ ಉಪವಿಭಾಗವೆಂದು ತೀರ್ಮಾನಿಸಲಾಗಿದೆ.

	ಉಪವಿಭಾಗ 1 ಯೂರೊಕಾರ್ಡೇಟ (ಟ್ಯೊನಿಕೇಟ): ಇವುಗಳ ದೇಹದ ಸುತ್ತದಪ್ಪವಾದ ಪೆಡುಸಾದ ಟೂನಿಕ್‍ಪದರ ಇರುವುದರಿಂದ ಟ್ಯೂನಿಕೇಟ ಎಂದೂ, ಇವನ್ನು ಮಟ್ಟಿದಾಗ ಇವು ನೀರನ್ನು ಚಿಮ್ಮುವುದರಿಂದ ಕಡಲು ಚಿರುಕಿಗಳೆಂದೂ (ಸೀಸ್ಕಟ್ಸ್ರ್ವ್) ನೋಟೋಕಾರ್ಡ್ ರಚನೆ ಡಿಂಬದ ಬಾಲಕ್ಕೆ ಸೀಮಿತವಾಗಿರುವದರಿಂದ ಯೂರೊ ಕಾರ್ಡೇಟ್‍ಗಳೆಂದೂ ಇವಕ್ಕೆ ಹೆಸರು ಕೊಡಲಾಗಿದೆ. ಟ್ಯೂನಿಕ್ ಹೊದಿಕೆ ಸಸ್ಯಗಳಲ್ಲಿ ಕಾಣಬರುವ ಸೆಲ್ಯುಲೋಸ್ ರೀತಿಯ ಟ್ಯೂನಿಸಿನ್ ವಸ್ತುವಿನಿಂದ ರಚಿತವಾಗಿದೆ.

	ಇವು ಸಾಮಾನ್ಯವಾಗಿ ಆಕರ್ಷಕ ಬಣ್ಣಗಳಿಂದ ಕೂಡಿದ ಪಾರದರ್ಶಕ ಮೆತು ಜೀವಿಗಳು. ಕೆಲವು ಉಪಗುಂಪಿನವು ಒಂಟಿ ಜೀವಿಗಳಾದರೆ ಮಿಕ್ಕವು ಸಮುದಾಯ ಪ್ರಾಣಿಗಳು. ಕೆಲವು ಪ್ರೌಢಾವಸ್ಥೆಯಲ್ಲಿ ಸ್ಥಾವರ ಜೀವಿಗಳೂ ಡಿಂಬಾವಸ್ಥೆಯಲ್ಲಿ ಜಂಗಮ ಜೀವಿಗಳೂ ಆಗಿವೆಯಾದರೆ ಮಿಕ್ಕವು ಜೀವಮಾನವಿಡೀ ಜಂಗಮಗಳಾಗಿ ವಾಸಿಸುವುವು.

	ಈ ಗುಂಪಿನ ಪ್ರಾಣಿಗಳ ಡಿಂಬಾವಸ್ಥೆಯಲ್ಲಿ ಅಥವಾ ನಿರಂತರವಾಗಿ ಡಿಂಬಾವಸ್ಥೆಯಲ್ಲೇ ಇರುವಂಥವುಗಳಲ್ಲಿ ಮಾತ್ರ ಬಾಲದಲ್ಲಿ ನೋಟೊಕಾರ್ಡ್ ಇರುತ್ತದೆ. ಸ್ಥಾವರ ರೂಪದ ಪ್ರೌಢಪ್ರಾಣಿಗಳಲ್ಲಿ ಟೊಳ್ಳು ನರಹುರಿಯ ಬಹುಭಾಗ ಕ್ಷೀಣ ಗೊಂಡು ಕೊಂಚಮಾತ್ರ ನರಮುಡಿಯಾಗಿ ರೂಪುತಳೆದಿದೆ. ಆದರೆ ಕಿವಿರು ರಂಧ್ರಗಳು ಮಾತ್ರ ಎಲ್ಲ ಹಂತಗಳಲ್ಲೂ ಇರುವುವು. ಹ್ಲದಯ ಉಬ್ಬಿದ ನಳಿಕೆಯಂತಿದ್ದು ಮೊದಲು ಒಂದು ದಿಕ್ಕಿನಲ್ಲಿ ಸಂಕುಚಿಸಿ ಆಮೇಲೆ ಅದರ ವಿರುದ್ಧ ದಿಕ್ಕಿನಲ್ಲಿ ಸಂಕುಚಿಸಿ ಪುನಃ ಮೊದಲು ದಿಕ್ಕಿಗೆ ವಾಪಸಾಗುತ್ತದೆ. ಹೀಗೆ ಹೃದಯದ ಸಂಕೋಚನ ವ್ಯಾಕೋಚನ ಕ್ರಿಯೆ ಪ್ರಾಣಿಗಳಲ್ಲೇ ಅತಿ ವಿಚಿತ್ರ ರೀತಿಯದ್ದಾಗಿದೆ. ರಕ್ತಕಣಗಳಲ್ಲಿ ಹೀಮೊಗ್ಲಾಬಿನ್ ಬದಲು ವೆನೇಡಿಯಮ್ಮಿನ ವಿವಿಧ ಆಮ್ಲಗಳಿರುವುವು. ಯೂರೊಕಾರ್ಡೇಟದ ಸದಸ್ಯಗಳು ದ್ವಿಲಿಂಗಿಗಳು. ಇವುಗಳ ಬೆಳವಣಿಗೆಯಲ್ಲಿ ಕ್ಷಿಪ್ರಕಾಲದ ದಿಂಬಗಳು ಕಂಡುಬರುತ್ತವೆ. ಈ ಗುಂಪಿನಲ್ಲಿ ಸುಮಾರು 2000 ಪ್ರಭೇದಗಳುಂಟು. ಎಲ್ಲವೂ ಕಡಲ ಜೀವಿಗಳು. ಇವುಗಳ ಪೈಕಿ ಸುಮಾರು 100 ಪ್ರಭೇದಗಳು ಬಯಲುಸಾಗರಗಳಲ್ಲಿ ವಾಸಿಸುವುವು.

	ಯೂರೊಕಾರ್ಡೇಟ ಉಪವಿಭಾಗದಲ್ಲಿ 3 ವರ್ಗಗಳಿವೆ:
	1 ಅಸಿಡಿಯೇಸಿಯ: ಸ್ಥಾವರ ಅಥವಾ ಜಂಗಮ ಜೀವಿಗಳಾದ ಒಂಟಿ ಅಥವಾ ಸಮುದಾಯ ಪ್ರಾಣಿಗಳು. ಇವುಗಳ ಡಿಂಬಾವಸ್ಥೆಯಲ್ಲಿ ಬಾಲ ಮತ್ತು ನೊಟೋಕಾರ್ಡ್ ಚೆನ್ನಾಗಿ ರೂಪುಗೊಂಡಿವೆ. ಪ್ರೌಢಾವಸ್ಥೆಯಲ್ಲಿ ಇವೆರಡೂ ಮಾಯವಾಗಿ ನರಹುರಿಯ ಸ್ವಲ್ಪಭಾಗ ನರಮುಡಿಯ (ಗ್ಯಾಂಗ್ಲಿಯ) ರೂಪತಳೆಯುವುದು. ಇದೇ ಮಿದುಳು. ಕಿವಿರು ರಂಧ್ರಗಳು ಅನೇಕ, ಬ್ರ್ಯಾಂಕಿಯಲ್ ಚೀಲದಲ್ಲಿ ಜೋಡಣೆಗೊಂಡಿವೆ. ಏಟ್ರಿಯಲ್ ಅವಕಾಶದೊಳಕ್ಕೆ ತೆರೆದುಕೊಳ್ಳುವಂತಿವೆ. ಡಿಂಬಗಳು ಜಂUಮರೀತಿಯವು.

	ಈ ವರ್ಗದಲ್ಲಿ ಅಸಿಡಿಯ ಸಿಂಪ್ಲಿಸೀಸ್, ಅಸಿಡಿಯ ಕಂಪಾಸಿಟೀ, ಅಸಿಡಿಯ ಲ್ಯೂಸಿಯೇ ಎಂಬ ಮೂರು ಗಣಗಳುಂಟು. ಉದಾ: ಅಸಿಡಿಯ, ಹರ್ಡಿ ಮೇನಿಯ, ಸಿಯೋನ, ಡಿಸ್ಟೂಮ, ಬೋಟ್ರಿಲಸ್ ಮತ್ತು ಪೈರೊಸೋಮ.

	2 ತ್ಯಾಲಿಯೇಸಿಯ: ಜಂಗಮರೂಪಿಗಳಾದ ಒಂಟಿ ಅಥವಾ ಸಮುದಾಯ ಜೀವಿಗಳು. ಪ್ರೌಢಾವಸ್ಥೆಯಲ್ಲಿ ಬಾಲ ಇಲ್ಲ. ದೇಹ ಪೀಪಾಯಿ ಆಕಾರದ್ದು. ಚಕ್ರಾಕಾರದ ಪೂರ್ಣ ಅಥವಾ ಅಪೂರ್ಣ ಸ್ನಾಯು ಪಟ್ಟೆಗಳಿಂದ ಆವೃತವಾಗಿದೆ. ದೇಹದ ಮುಂಭಾಗದಲ್ಲಿ ಬಾಯಿಯೂ ಹಿಂಭಾಗದಲ್ಲಿ ಏಟ್ರಿಯಮ್ ತೆರಪೂ ಇವೆ. ಫ್ಯಾರಿಂಕ್ಸಿನಲ್ಲಿ ಎರಡು ದೊಡ್ಡ ಅಥವಾ ಅನೇಕ ಸಣ್ಣ ಸ್ಟಿಗ್ಮಟಗಳುಂಟು. ಇವು ಏಟ್ರಿಯಮ್ ಅವಕಾಶದೊಳಕ್ಕೆ ತೆರೆಯುವುವು. ಈ ಗುಂಪಿನ ಪ್ರಾಣಿಗಳಲ್ಲಿ ಪರ್ಯಾಯ ಸಂತಾನ ಪದ್ಧತಿ ಇದ್ದು ಲೈಂಗಿಕ ಹಾಗೂ ನಿರ್ಲಿಂಗ ಸಂತತಿಗಳು ರೂಪು ಗೊಳ್ಳುವುವು. ಡಿಂಬಾವಸ್ಥೆಯಲ್ಲಿ ಬಾಲವಿರಬಹುದು ಅಥವಾ ಇಲ್ಲದಿರಬಹುದು.

	ಈ ವರ್ಗದಲ್ಲಿ ಸೈಕ್ಲೊಮಯೇರಿಯ (ಡೋಲಿಯೋಲಿಡ) ಹಾಗೂ ಹೆಮಿಮಯೇರಿಯ (ಸ್ಯಾಲ್ಪಿಡ) ಎಂಬ ಎರಡು ಉದಾ: ಡೋಲಿಯೋಲಿಮ್ ಮತ್ತು ಸ್ಯಾಲ್ಪ.

	3 ಲಾರ್ವೇಸಿಯ (ಅಪೆಂಡಿಕ್ಯುಲ್ಭೆರಿಯ): ಜಂಗಮ ರೂಪಿಗಳಾದ ಬಾಲವುಳ್ಳ ಪ್ರಾಣಿಗಳು. ಇವಕ್ಕೆ ನಿರಂತರವಾದ ಡಿಂಬರೂಪವಿರುವುದರಿಂದ ಇವಕ್ಕೆ ಲಾರ್ವೇಸಿಯ ಪ್ರಾಣಿಗಳೆಂಬ ಹೆಸರು ಬಂದಿದೆ ಅಂದರೆ ಇವು ರೂಪಾಂತರ ಹೊಂದದೆ ಅಜೀವಪರ್ಯಂತ ಡಿಂಬದ ಲಕ್ಷ್ಷಣಗಳನ್ನೇ ತೋರುವುವು. ಈ ವಿಚಿತ್ರ ಲಕ್ಷಣಕ್ಕೆ ನಿಯೋಡನಿ ಎಂದು ಹೆಸರು. ಇವುಗಳ ದೇಹವನ್ನು ಆವರಿಸಿರುವ ದೊಡ್ಡ ಟೆಸ್ಟ್ ಕವಚ ನಿರಂತರವಾದುದಲ್ಲ. ಅವನ್ನು ಆಗಾಗ್ಗೆ ತ್ಯಜಿಸಿ ಹೊಸ ಕವಚವನ್ನು ಉತ್ಪತ್ತಿಮಾಡಿಕೊಳ್ಳುವುದು. ಇವು ಕೂಡ ದ್ವಿಲಿಂಗಿಗಳು. ಬಾಲದಲ್ಲಿ ನೋಟೊಕಾರ್ಡ್ ಇದೆ. ಮುಂಭಾಗದಲ್ಲಿ ನರಮುಡಿಯುಂಟು. ಉದಾ: ಆಯ್ಕೊಪ್ಲೂರ್, ಅಪೆಂಡಿಕ್ಯುಲೇರಿಯ.

ಉಪ ವಿಭಾಗ II ಕೆಫಲೊಕಾರ್ಡೇಟ (ಏಕ್ರೇನಿಯ) : ಸಮುದ್ರವಾಸಿಗಳನ್ನು ಒಳಗೊಂಡ ಗುಂಪು. ಇವುಗಳನ್ನು ದೇಹ ಸಣ್ಣದು, ಕಂಕಾಲ, ಜೊತೆ ಈಜು ರೆಕ್ಕೆಗಳು, ಕಂಕಾಲ, ಕಣ್ಣ ಮತ್ತು ಶಬ್ದಾಂಗಗಳು ಇಲ್ಲ. ಆದರೆ ನರಮಂಡಲ ಮತ್ತು ರಕ್ತ ಪರಿಚಲನಾ ವ್ಯವಸ್ಥೆಗಳು ಸರಳವಾಗಿದ್ದು ಕಾರ್ಡೇಟ 

ಮಾದರಿಯನ್ನು ಹೋಲುವುವು. ಮಿದುಳು ಚೆನ್ನಾಗಿ ಬೆಳೆದಿಲ್ಲ. ಬೆನ್ನುಹುರಿಯನರಗಳಲ್ಲಿ ಚೆನ್ನಾಗಿ ಬೆಳೆದ ಡಾರ್ಸಲ್ ಮತ್ತು ವೆಂಟ್ರಲ್ ಬೇರುಗಳಿವೆ. ಲಿಂಗಗಳು ಬೇರೆ ಬೇರೆಯಾಗಿವೆ. ಸೀಲೋಮ್ ಅವಕಾಶ ಎಂಟರೊಸೀಲಿಕ್ ರೀತಿಯದು.

ಈ ಉಪವಿಭಾಗದಲ್ಲಿರುವ ಒಂದೇ ಒಂದು ಕುಟುಂಬವಾದ ಬ್ರ್ಯಾಂಕಿಯೊಸ್ಟೋಮಿಡೀಯಲ್ಲಿ ಬ್ರ್ಯಾಂಕಿಯೊಸ್ಟೋಮ (ಆಂಫಿಯಾಕ್ಸಸ್) ಮತ್ತು ಎಸಿಮೆಟ್ರಿಯಾನ್ ಎಂಬ ಎರಡು ಜಾತಿಗಳಿವೆ. ಬ್ರಾಂಕಿಯೊಸ್ಟೋಮದಲ್ಲಿ ಅಂಗಾಂಗಗಳು ಜೋಡಿ ಸರಣಿಯಲ್ಲಿಯೂ ಮೆಟಪ್ಲೂರ ಮಡಿಕೆಗಳ ಸಮಾಂತರವಾಗಿಯೂ ಎಸಿಮೆಟ್ರಿಯಾನ್ನಲ್ಲಿ ಅವು ಅಸಮಾಂತರವಾಗಿಯೂ ಇವೆ. ಕಾರ್ಡೇಟಗಳ ಒಳರಚನೆಯ ಹೋಲಿಕೆ ಮತ್ತು ಕ್ರಮಬದ್ಧ ಸಂಬಂಧಗಳನ್ನು ತಿಳಿಯಲು ಈ ಉಪವಿಭಾಗ ಬಹು ಮುಖ್ಯವಾದ್ದು.

ಉಪವಿಭಾಗ III ಹೆಮಿಕಾರ್ಡೇಟ : ಒಂಟಿ ಅಥವಾ ಸಮುದಾಯ ಜೀವಿಗಳನ್ನು ಒಳಗೊಂಡಿವೆ. ಇದರ ಸದಸ್ಯಗಳು ಹುಳುಗಳಂತೆ ಕಾಣುತ್ತದೆ. ಇವುಗಳ ಸೀಲೋಮ್ ಅವಕಾಶ ಎಂಟರೊಸೀಲಿಕ್ ತೆರನಾದುದು. ದೇಹದಲ್ಲಿ ಸಾಮಾನ್ಯವಾಗಿ ಸೊಂಡಿಲು ಕತ್ತು ಮತ್ತು ಮುಂಡ ಎಂಬ ಮೂರು ಅಸಮ ಭಾಗಗಳನ್ನು ಗುರುತಿಸಬಹುದು. ಇವುಗಳಿಗೆ ಅನುಸಾರವಾಗಿ ಸೀಲೋಮ್ ಕೂಡ 3 ಭಾಗಗಳಾಗಿದೆ. ಕತ್ತು ಮತ್ತಿ ಮುಂಡ ಭಾಗಗಳಲ್ಲಿ ಸಿಲೋಮ್ ಜೋಡಿಯಾಗಿಯೂ ಸೊಂಡಿಲಿನಲ್ಲಿ ಒಂಟಿಯಾಗಿಯೂ ಇದೆ. ಕಿವಿರುರಂಧ್ರಗಳು ಕೆಲವು ಉಪಗುಂಪುಗಳಲ್ಲಿ ಇಲ್ಲವೇ ಇಲ್ಲ. ಇನ್ನು ಕೆಲವಲ್ಲಿ ಜೊತೆಜೊತೆಯಾಗಿರುವುವು. ನೋಟೊಕಾರ್ಡ್ ಮೊಟಕಾಗಿದ್ದು ದೇಹದ ಮುಂಭಾಗಕ್ಕೆ ಸೀಮಿತವಾಗಿದೆ. ಇದಕ್ಕೆ ಬಕಲ್ ಡೈವೆರ್ಟಿಕ್ಯುಲಮ್ ಎಂದು ಹೆಸರು. ನರಮಂಡಲ ನಿಮ್ಮ ಬಗೆಯ ಅಂತರ್ ಎಪಿಡರ್ಮಲ್ ರೀತಿಯದು. ಮುಂಡದಲ್ಲಿ ಡಾರ್ಸಲ್ ಮತ್ತು ವೆಂಟ್ರಲ್‍ನಾಳಗಳೂ ಸೊಂಡಿಲೂ ಭಾಗದಲ್ಲಿ ಸಂಕುಚಿತ ಚೀಲವೂ ಇವೆ. ಕತ್ತಿನಭಾಗದಲ್ಲಿ ತಂತು ಉಪಾಂಗಗಳಿರಬಹುದು. ಈ ಉಪವಿಭಾಗದ ವರ್ಗಗಳು ಇಂತಿವೆ :

ವರ್ಗ 1 ಎಂಡರೊನ್ಯೂಸ್ಟ : ಇವಕ್ಕೆ ಉಕಾರ್ನ್ ಹುಳುಗಳೆಂದು ಹೆಸರು. ಇವು ಒಂಟಿಜೀವಿಗಳು ಉದಾ : ಬೆಲನೊಗ್ಲಾಸಸ್, ಟೈಕೊಡೀರ, ಸ್ಯಾಕೊಗ್ಲಾಸಸ್.

ವರ್ಗ 2 ಟ್ರೀರೊಬ್ರ್ಯಾಂಕಿಯ : ಸಮುದಾಯ ಜೀವಿಗಳು. ಇವು ಗಾತ್ರದಲ್ಲಿ ಸಣ್ಣವು. ಇದರಲ್ಲಿ ರ್ಯಾಬ್ಡೊಪ್ಲೂರಿಡ ಮತ್ತು ಕೆಫಲೊಡಿಸ್ಕಿಡ ಎಂಬ ಎರಡು ಗಣಗಳುಂಟು. ಉದಾ : ರ್ಯಾಬ್ಡೊಪ್ಲೂರಿಡ ಮತ್ತು ಕೆಫಲೊಡಿಸ್ಕಸ್.

ವರ್ಗ 3 ಪ್ಲ್ಯಾಂಕದಟೊಸಿಸ್ಟರಾಯ್ಡಿಯ.

ಹೆಮಿಕಾರ್ಡೇಟ ಪ್ರಾಣಿಗಳ ನೋಡೊಕಾರ್ಡ್ ನಿಜವಾದ ನೋಟೊಕಾರ್ಡಿನ ಯಾವ ಲಕ್ಷಣಗÀಳನ್ನೂ ತೋರಿಸುವುದಿಲ್ಲ. ಅಲ್ಲದೆ ಹೆಮಿಕಾರ್ಡೇಟದ ಅಂಗವ್ಯೂಹ ರಚನೆಗಳು ಅಕಶೇರುಕಗಳ ರಚನೆಗಳನ್ನು ಹೋಲುತ್ತದೆ. ಇದರಿಂದಾಗಿ ಈ ಗುಂಪನ್ನು  ಪ್ರೋಟೋಕಾರ್ಡೇಟ್ ಗುಂಪಿನಿಂದ (ಹಾಗೂ ಕಾರ್ಡೇಟ್ ಗುಂಪಿನಿಂದ) ಬೇರ್ಪಡಿಸಿ ಅಕಶೇರುಕಗಳ ಒಂದು ವಿಶಿಷ್ಟ ಗುಂಪೆಂದು ಪರಿಗಣಿಸಲಾಗುತ್ತಿದೆ.			(ಎನ್.ವಿ.ಎ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ